ಕಾಸರಗೋಡು: ಮಂಜೇಶ್ವರ ಬಂದರು ಇಂದು ಲೋಕಾರ್ಪಣೆಗೊಳ್ಳಲಿದೆ.
ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ವೀಡಿಯೋ ಕಾನ್ಪರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಂದರಿಗೆ ಚಾಲನೆ ನೀಡಲಿದ್ದು, ಇದರೊಂದಿಗೆ ಕೊಯಿಲಾಂಡಿಯ ಬಂದರನ್ನೂ ಅವರು ಉದ್ಘಾಟಿಸುವರು.
ಕೇಂದ್ರ ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ರಾಜ್ಯ ಮೀನುಗಾರಿಕೆ ಸಚಿವೆ ಮೆರ್ಸಿ ಕುಟ್ಟಿಯಮ್ಮ ಅಧ್ಯಕ್ಷತೆ ವಹಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ಸಿ.ಕಮರುದ್ದೀನ್ ಮೊದಲಾದವರು ಭಾಗವಹಿಸಲಿದ್ದಾರೆ.
ಅನೇಕ ವರ್ಷಗಳ ಕನಸು ನನಸಾಗುವಂತೆ ಮಂಜೇಶ್ವರ ಬಂದರು ಉದ್ಘಾಟನೆಗೆ ಸಿದ್ಧವಾಗಿದ್ದು, ಇಂದು ಲೋಕಾರ್ಪಣೆಗೊಳ್ಳಲಿದೆ.
ಕಾಸರಗೋಡು ಜಿಲ್ಲೆಯ ಮೀನುಗಾರಿಕೆ ವಲಯಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ಮಂಜೇಶ್ವರದಲ್ಲಿ ಬಂದರು ನಿರ್ಮಾಣಗೊಳ್ಳಬೇಕು ಎಂಬ ಬೇಡಿಕೆ ತುಂಬ ಹಳೆಯದು. ಜಿಲ್ಲೆಯ ಕೊಯಿಪ್ಪಾಡಿ, ಶಿರಿಯ, ಬಂಗ್ರ ಮಂಜೇಶ್ವರ ಮತ್ಸ್ಯ ಗ್ರಾಮಗಳ ಸರಿಸುಮಾರು ಹತ್ತು ಸಾವಿರ ಮೀನುಗಾರರು ಈ ಬಂದರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹಾರ್ಬರ್ ಕಾರ್ಯಕಾರಿ ಇಂಜಿನಿಯರಿಂಗ್ ಎ.ಮುಹಮ್ಮದ್ ಅಶ್ರಫ್ ತಿಳಿಸಿದರು.
ಬಂದರು ಚಟುವಟಿಕೆ ಆರಂಭಿಸುವ ಮೂಲಕ ಸ್ಥಳೀಯ 1200ಕ್ಕೂ ಅಧಿಕ ಮೀನುಗಾರ ಕಾರ್ಮಿಕರಿಗೆ ಪ್ರತ್ಯಕ್ಷವಾಗಿ, 4800 ಮಂದಿಗೆ ಪರೋಕ್ಷವಾಗಿ ಪ್ರಯೋಜನ ಲಭಿಸಲಿದೆ. ಮೀನುಗಾರಿಕೆ ಸಂಬಂಧ ಮಾರಾಟ, ರಫ್ತು ಸಂಬಂಧಿ ವಲಯಗಳ ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ.
ಮಂಜೇಶ್ವರ ಬಂದರು ಯೋಜನೆ ಒಟ್ಟು 48.80 ಕೋಟಿ ರೂ.ನಲ್ಲಿ ಜಾರಿಗೊಳ್ಳಲಿದೆ. ಇದರಲ್ಲಿ ಶೇ 75 ಕೇಂದ್ರ ಸರಕಾರದ ಪಾಲು, ಶೇ 25 ರಾಜ್ಯ ಸರಕಾರದ ಪಾಲು ಇರುವುದು. ಯೋಜನೆಗಾಗಿ ಈಗಾಗಲೇ 45.71 ಕೋಟಿ ರೂ. ವೆಚ್ಚ ನಡೆಸಲಾಗಿದೆ. ಪುಣೆಯ ಕೇಂದ್ರ ಸರಕಾರಿ ಸಂಸ್ಥೆ ಸೆಂಟ್ರಲ್ ವಾಟರ್ ಆಂಡ್ ಪವರ್ ರಿಸರ್ಚ್ ಸ್ಟೇಷನ್ ನಡೆಸಿರುವ ಅಧ್ಯಯನ ತಳಹದಿಯ್ಲಲಿ ಈ ಹಾರ್ಬರ್ ನ ರೂಪುರೇಷೆ ರಚನೆಗೊಂಡಿದೆ. ಹಾರ್ಬರ್ ಬೇಸಿನ್ ನೊಂದಿಗೆ ಸೇರಿಕೊಂಡು ಮುಸೋಡಿ ಪ್ರದೆಶದಲ್ಲಿ 8.92 ಎಕ್ರೆ, ಹೊಸಬೆಟ್ಟು ಪ್ರದೇಶದಲ್ಲಿ 2.85 ಎಕ್ರೆ ಸಹಿತ 11.77 ಎಕ್ರೆ ಜಾಗದಲ್ಲಿ ನಿರ್ಮಾಣ ಚಟುವಟಿಕೆಗಳಿಗಾಗಿ ಡ್ರಡ್ಜಿಂಗ್ ನಡೆಸಲಾಗಿದೆ.
ವಿವಿಧ ಸೌಲಭ್ಯಗಳು:
ಮೀನುಗಾರಿಕೆ ಜಲವಾಹನಗಳು ದಡಸೇರುವ ನಿಟ್ಟಿನಲ್ಲಿ ಶಾಂತಯುತ ಹಾರ್ಬರ್ ಬೇಸಿನ್ ಒದಗಿಸುವ ನಿಟ್ಟಿನಲ್ಲಿ 490 ಮೀಟರ್, 530 ಮೀಟರ್ ಉದ್ದನೆಯ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಬ್ರೇಕ್ ವಾಟರ್ ಗಳನ್ನು ನಿರ್ಮಿಸಲಾಗಿದೆ. 275 ಬೋಟುಗಳಿಗೆ ಈ ಸೌಲಭ್ಯವಿದೆ. ಯೋಜನೆ ಸಂಬಂಧಿ ಚಟುವಟಿಕೆಗಳು ಮುಸೋಡಿ ಪ್ರದೇಶದ ಜಾಗದಲ್ಲಿ ನಡೆದಿವೆ. ಯಾಂತ್ರೀಕೃತ ಬೋಟುಗಳಿಗೆ 80 ಮೀಟರ್, ಕಿರು ದೋಣಿಗಳಿಗಾಗಿ 20 ಮೀಟರ್ ಸಹಿತ 100 ಮೀಟರ್ ವಾರ್ಫ್ ಮತ್ತು ಹರಾಜು ಕೇಂದ್ರವನ್ನೂ ನಿರ್ಮಿಸಲಾಗಿದೆ. ಪಾಕಿರ್ಂಗ್ ಏರಿಯಾ, ವರ್ಕ್ ಶಾಪ್, ಶಾಪ್ ಬಿಲ್ಡಿಂಗ್, ರೆಸ್ಟ್ ಶೆಡ್, ಟಾಯ್ಲೆಟ್ ಬ್ಲೋಕ್, ನೀರು ಸಂಗ್ರಹಾಗಾರ, ಅತಿಥಿಗೃಹ, ವಿದ್ಯುದೀಕರಣ ಸಹಿತ ಎಲ್ಲ ಹಿನ್ನೆಲೆ ಸೌಲಭ್ಯ ಸಿದ್ಧಪಡಿಸಲಾಗಿದೆ.
ರಾಜ್ಯ ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಸದ್ರಿ ಎರಡು ಮೀನು ಇಳಿಕೆ ಕೇಂದ್ರ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಮಂಜೇಶ್ವರ ಮೀನು ಇಳಿಕೆ ಕೇಂದ್ರ ಚಟುವಟಿಕೆ ಸುಗಮಗೊಳಿಸುವ ನಿಟ್ಟಿನಲ್ಲಿ ಬ್ರೇಕ್ ವಾಟರ್ ನ ಉದ್ದ ಹೆಚ್ಚಿಸುವ ಚಟುವಟಿಕೆ ಮುಂದುವರಿಯುತ್ತಿದೆ.