ಮಂಗಳೂರು : ಐತಿಹಾಸಿಕ ಬಾಬರಿ ಮಸೀದಿ ತೀರ್ಪು ಇಂದು ಹೊರ ಬಿದ್ದಿದೆ. ಒಂದು ಕಡೆ ತೀರ್ಪಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ಇದೇ ತೀರ್ಪಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿವೆ.
ಬಾಬರಿ ಮಸೀದಿ ತೀರ್ಪನ್ನು ಖಂಡಿಸಿ, ಮಂಗಳೂರು ಎಸ್ ಡಿಪಿಐ ದಕ ಜಿಲ್ಲಾ ಸಮಿತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾ ನಿರತ ಪಕ್ಷದ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಚಾರ್, ಕಾರ್ಪೋರೇಟರ್ ಮುನೀಬ್ ಬೆಂಗರೆ ಮೊದಲಾದವರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡರು.
ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಹಿನ್ನೆಲೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 6 ಕೆಎಸ್ಆರ್ಪಿ, 4 ಸಿಎಆರ್ ತುಕಡಿಗಳ ಸಹಿತ ವಿವಿಧೆಡೆ ಪೊಲೀಸರ ನಿಯೋಜನೆ ಮಾಡಲಾಗಿತ್ತು. ವಾಹನ ತಪಾಸಣೆಗಳನ್ನು ಬಿಗಿಗೊಳಿಸಲಾಗಿತ್ತು. ಇಷ್ಟಿದ್ದರೂ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತೀರ್ಪು ಹೊರ ಬೀಳುತ್ತಿದ್ದಂತೆ ಎಸ್ ಡಿಪಿಐ ದಕ್ಷಿಣಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿದ್ದಾರೆ.