ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.5ರಂದು ಆರಂಭಗೊಂಡ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಗುರುವಾರ ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನಡೆದವು.ಬುಧವಾರ ಬೆಳಿಗ್ಗೆ ಆಶ್ಲೇಷಬಲಿ, ಮಹಾಪೂಜೆ (ತುಲಾಭಾರ ಸೇವೆ), ಚೂರ್ಣೋತ್ಸವ, ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ಪಲ್ಲಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲಿಉತ್ಸವ, ಸಿರಿಗಳ ಜಾತ್ರೆ, ಕುಮಾರ ದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ನಡೆಯಿತು.

ಸಾಂಸ್ಕೃತಿಕ ವೇದಿಕೆಯಲ್ಲಿ ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಗೆಯೊಂದಿಗೆ ‘ನಾಗ ಸಂಜೀವನ’ಯಕ್ಷಗಾನ ಪ್ರದರ್ಶನಗೊಂಡಿತು. ಫೆ.9 ರಂದು ಸಂಪ್ರೋಕ್ಷಣೆ, ಮಂಗಳಾ ಪ್ರಸಾದ ವಿತರಣೆ ನಡೆಯಿತು.ಫೆ.6ರಂದು ತೋರಣ ಮುಹೂರ್ತ, ಧ್ವಜಾರೋಹಣ, ದೊಡ್ಡ ರಂಗಪೂಜೆ, ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಕುಣಿತಾ ಭಜನೆ, ಅನ್ನಸಂತರ್ಪಣೆ ನಡೆಯಿತು.

ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆದ್ರ ಪಿಂಗಾರ ಕಲಾವಿದರಿಂದ ‘ಭರಣಿ ಕೃತಿಕೆ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.ಫೆ 7ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ, ಪಟ್ಟದ ಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ, ಕುಣಿತ ಭಜನೆ ನಡೆಯಿತು.ಫೆ.8ರಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಕ್ಷೇತ್ರಕ್ಕೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದರು.

ಶಾಸಕ ಹರೀಶ್ ಪೂಂಜ, ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ ಕನರೊಟ್ಟು, ಮೊಕ್ತೇಸರರಾದ ರತ್ನಾಕರ ಬುಣ್ಣಾನ್, ಎಂ.ಎಸ್.ಪೂಜಾರಿ, ವಿಜಯಕುಮಾರ್ ಬಂಗ, ಎಂ.ಅಣ್ಣಪ್ಪ ಹೆಗ್ಡೆ, ಸುಜಯ ಹೆಗ್ಡೆ, ಸುರೇಂದ್ರ ಪೂಜಾರಿ ಮತ್ತಿತರರು ಇದ್ದರು.