ಮಂಗಳೂರು ಸಿಸಿಬಿ ವಿರುದ್ದ ಸಿಐಡಿ ತನಿಖೆಗೆ ಆದೇಶ : ದುಬಾರಿ ಕಾರು ಮಾರಾಟ ಮಾಡಿ ಸಿಕ್ಕಿಬಿದ್ರಾ ಅಧಿಕಾರಿಗಳು!

ಮಂಗಳೂರು : ಹಣ ಡಬ್ಲಿಂಗ್ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ವಶ ಪಡೆದ ಕಾರನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರ ವಿರುದ್ದ ಇದೀಗ ಡಿಜಿಪಿ ಪ್ರವೀಣ್ ಸೂದ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉದನೆ ಸಮೀಪದಲ್ಲಿ ಹಣ ಡಬ್ಲಿಂಗ್ ಜಾಲದಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಕೇರಳ ಮೂಲದ ಆರೋಪಿಗಳನ್ನು ಬಂಧಿಸಲಾಗಿತ್ತು. ಅಲ್ಲದೇ ಬಂಧಿತರಿಂದ ಮೂರು ದುಬಾರಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ನಾರ್ಕೋಟಿಕ್ ಠಾಣೆಯ ಪೊಲೀಸರು ಬಿಎಂಡಬ್ಲ್ಯು, ಪೋರ್ಷ್ ಹಾಗೂ ಜಾಗ್ವಾರ್ ಕಾರನ್ನು ವಶಕ್ಕೆ ಪಡೆದಿದ್ದರು. ಆದರೆ ಈ ಪೈಕಿ 50 ಲಕ್ಷ ಮೌಲ್ಯದ ಜಾಗ್ವಾರ್ ಕಾರನ್ನು ಮಾರಾಟ ಮಾಡಲಾಗಿದೆ. ಈ ಡೀಲ್ ನಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

READ ALSO

ಸಿಸಿಬಿ ಹಿಂದಿನ ಪಿಎಸ್ ಐ ಕಬ್ಬಾಳ್ ರಾಜ್, ನಾರ್ಕೋಟಿಕ್ ಇನ್ ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿಯ ಆಶಿತ್ ಡಿಸೋಜಾ, ರಾಜೇಂದ್ರ ಪ್ರಸಾದ್ ಅವರು ಆರೋಪಿಗಳ ಜೊತೆ ಸೇರಿ ಕಾರನ್ನು ಹೈದ್ರಾಬಾದ್ ಮೂಲದ ವ್ಯಕ್ತಿಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮೂಗು ತೂರಿಸಿರೋದು ಅನುಮಾನಗಳನ್ನು ಹುಟ್ಟುಹಾಕಿದೆ.

ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಮಂಗಳೂರಿಗೆ ಆಗಮಿಸಿ ತನಿಖೆಯನ್ನು ಆರಂಭಿಸಿದ್ದಾರೆ. ಪ್ರಕರಣದಲ್ಲಿ 4 ಅಧಿಕಾರಿಗಳ ಜೊತೆಗೆ ಇನ್ನಷ್ಟು ಸಿಬ್ಬಂದಿಗಳು ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲೀಗ ಸಿಐಡಿ ಅಧಿಕಾರಿಗಳು ಸಮಗ್ರ ತನಿಖೆಗೆ ಮುಂದಾಗಿದ್ದಾರೆ.