ಪಿಲಿಕುಳ ವನ್ಯಜೀವಿ ಧಾಮದಲ್ಲಿ ಗೂಡಿನಿಂದ ಹೊರ ಬಂದ ಕಾಡಿನ ರಾಜ! ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಮತ್ತೇ ಮೂಲ ವಾಸಸ್ಥಾನಕ್ಕೆ ವಾಪಾಸ್!

ಮಂಗಳೂರು: ಸಿಂಹವೊಂದು ತನ್ನ ಗೂಡಿನಿಂದ ಹೊರಗೆ ಬಂದು ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದಿಂದ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿರುವುದು ಜುಲೈ ತಿಂಗಳಿನಲ್ಲಿ. ಪಿಲಿಕುಳದ ಚಿರತೆ, ಹುಲಿ, ಆ ಬಳಿಕ ಸಿಂಹದ ಎನ್‌ಕ್ಲೋಶರ್ ಇದೆ. ಈ ಎನ್‌ಕ್ಲೋಶರ್‌ನ ಒಂದು ಬದಿಯಲ್ಲಿ ಮೃಗಗಳಿಗೆ ಮಲಗುವುದಕ್ಕೆ ಗೂಡುಗಳಿರುತ್ತವೆ. ಅವುಗಳಿಗೆ ಆಹಾರವನ್ನು ಹಾಕುವ, ಚಿಕಿತ್ಸೆ ನೀಡುವ ವ್ಯವಸ್ಥೆ ಎಲ್ಲವೂ ಅಲ್ಲೇ ಇರುತ್ತದೆ.

ಹೀಗಿರುವಾಗ ಜುಲೈ ತಿಂಗಳ ಒಂದು ದಿನ ಸಿಂಹದ ಗೂಡು ಶುಚಿಗೊಳಿಸಲು ನೌಕರರೊಬ್ಬರು ಹೋಗಿದ್ದಾರೆ. ಈ ಗೂಡಿನ ಬಳಿ ಕಂದಕ ಇರಲಿಲ್ಲ, ಒಂದು ಗೇಟ್ ದಾಟಿಕೊಂಡು ಹೋಗಿ ಗೂಡಿನೊಳಗೆ ಶುಚಿಗೊಳಿಸುತ್ತಿರುವಾಗ ಇನ್ನೊಂದು ಗೇಟ್‌ನ ಚಿಲಕ ಹಾಕಿಲ್ಲದ್ದರಿಂದ, ಸಿಂಹ ಹಠಾತ್ ಆಗಿ ಹೊರಬಂದಿದೆ. ನೌಕರ ಈ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.

ತಕ್ಷಣ ಮೃಗಾಲಯದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಅವರ ಮೂರು ತಂಡ ರಚನೆ ಮಾಡಿ ಇಡೀ ಝೂನ ಆವರಣ ಹುಡುಕಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸುರಕ್ಷಿತ ಜಾಗದಲ್ಲಿರುವಂತೆ ಸೂಚಿಸಿದ್ದಾರೆ. ಸುಮಾರು ಮೂರು ಗಂಟೆ ಹುಡುಕಿದ ಬಳಿಕ ಸಿಂಹವು, ಸಿಂಹದ ಗೂಡಿನ ಹಿಂಭಾಗದ ಬೇಲಿ ಹಾಕಿದ ಆವರಣದಲ್ಲಿ ಹುಲ್ಲಿನ ಮರೆಯಲ್ಲಿ ಪತ್ತೆಯಾಗಿದ್ದು, ಅದನ್ನು ಪ್ರಜ್ಞೆ ತಪ್ಪಿಸಿ ಮತ್ತೆ ಗೂಡಿಗೆ ಸೇರಿಸಲಾಯಿತು.

READ ALSO

ಇಂತಹ ಘಟನೆ ನಡೆದಾಗ ಸನ್ನದ್ಧರಾಗಲು ನಮಗೂ ಒಂದು ತರಬೇತಿ ನೀಡಿದಂತಾಯಿತು, ಅದೃಷ್ಟವಷಾತ್ ಯಾವುದೇ ಅಪಾಯ ನಡೆದಿಲ್ಲ, ಸಿಂಹ ಹೊರಬಂದಿಲ್ಲ, ಪ್ಯಾಡಕ್‌ನಲ್ಲೇ ಎನ್ನುತ್ತಾರೆ ಭಂಡಾರಿ.