ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ತುಳುನಾಡ ಜನತೆಯ ಪರವಾಗಿ ಸರಕಾರಕ್ಕೆ ಒತ್ತಾಯಿಸುವಂತೆ ತುಳುನಾಡು ಸಂಘಟನೆಗಳಿಂದ ಡಾ. ಹೆಗ್ಗಡೆಯವರಿಗೆ ಮನವಿ

ಧರ್ಮಸ್ಥಳ: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ಸರಕಾರಕ್ಕೆ ಸಮಸ್ತ ಜನರ ಪರವಾಗಿ ಒತ್ತಾಯಿಸುವಂತೆ, ಧರ್ಮಸ್ಥಳದ ಮುಖ್ಯ ನಾಮಫಲಕವನ್ನು ತುಳು ಲಿಪಿಯಲ್ಲಿಯೂ ಇರುವಂತೆ ಮತ್ತು ಧರ್ಮಸ್ಥಳದಲ್ಲಿ ಸೂಚನಾ ವ್ಯವಸ್ಥೆಯನ್ನು ತುಳು ಭಾಷೆಯಲ್ಲಿಯೂ ತಿಳಿಸುವಂತೆ ಆಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮತ್ತು ಜೈ ತುಲುನಾಡ್ (ರಿ) ಸಂಘಟನೆಯ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.

READ ALSO


ಈ ಸಂದರ್ಭದಲ್ಲಿ ಜೈ ತುಳುನಾಡ್ ಇದರ ಬೆಂಗಳೂರು ಘಟಕದ ಸದಸ್ಯರಾದ ಧನಂಜಯ್ ಆಚಾರ್ಯ ಇವರಿಂದ ಓಂ ಎಂದು ತುಳು ಲಿಪಿಯಲ್ಲಿ ಬರೆದಂತಹ ಫಲಕವನ್ನು ಕಾಣಿಕೆಯಾಗಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನೀಡಿದರು.
ಜೈ ತುಳುನಾಡ್ ಸಂಘಟನೆ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಎಂಬ ತುಳು ಲಿಪಿಯ ನಾಮಫಲಕವನ್ನು ಗೌರವ ಕಾಣಿಕೆಯಾಗಿ ನೀಡಲಾಯಿತು.


ಮನವಿ ಸ್ವೀಕರಿಸಿದ ಡಾ. ಹೆಗ್ಗಡೆಯವರು, ಧರ್ಮಸ್ಥಳ ಕ್ಷೇತ್ರದಲ್ಲಿ ತುಳು ಭಾಷೆಯಲ್ಲಿ ಸೂಚನಾ ವ್ಯವಸ್ಥೆ, ಮುಖ್ಯ ಫಲಕವನ್ನು ತುಳು ಲಿಪಿಯಲ್ಲಿ ಮಾಡುವುದಾಗಿ ಹಾಗೂ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸಾರ್, ಟೈಮ್ಸ್ ಆಫ್ ಕುಡ್ಲ, ತುಳು ಪತ್ರಿಕೆಯ ಸಂಪಾದಕರಾದ ಎಸ್.ಆರ್. ಬಂಡಿಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಚೇತಕ್ ಪೂಜಾರಿ, ಜೈ ತುಳುನಾಡ್ ಸಂಘಟನೆ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಜೈ ತುಲುನಾಡ್ ಬೆಂಗಳೂರು ಘಟಕದ ಸದಸ್ಯ ಧನಂಜಯ್ ಆಚಾರ್ಯ, ಜೈ ತುಳುನಾಡ್ ಸದಸ್ಯರಾದ ಪೃಥ್ವಿರಾಜ್, ಅಶ್ವಿನ್, ಕವಿತಾ ಆಚಾರ್ಯ, ಅದಿತಿ, ಶ್ರೀಮತಿ ಆಚಾರ್ಯ, ಶ್ರೀನಿಧಿ, ಪ್ರವೀಣ್, ಪ್ರಶಾಂತ್ ಉಪಸ್ಥಿತರಿದ್ದರು.