ಸಿ.ಸಿ.ಬಿ ಪೋಲಿಸರ ಎಣ್ಣೆ ಪಾರ್ಟಿ ಪ್ರಕರಣ ಎಂಟು ಮಂದಿ ವಿರುದ್ಧ ಶಿಸ್ತು ಕ್ರಮ, ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಆದೇಶ!

ಮಂಗಳೂರು: ನಿನ್ನೆಯಷ್ಟೇ ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಶಿಸ್ತು ಕ್ರಮ ಜರುಗಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಎಂಟು ಮಂದಿ ಸಿಬಂದಿಯನ್ನು ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ವರ್ಗಾಯಿಸಿ ಆದೇಶ ಮಾಡಿದ್ದಾರೆ. 

ಈ ಘಟನೆಗೆ ಸಂಬಂಧಿಸಿ ಹೆಚ್ಚುವರಿ ಇಲಾಖಾ ತನಿಖೆ ಕೈಗೊಂಡು ವಿಚಾರಣಾ ವರದಿ ನೀಡುವಂತೆ ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಸೂಚಿಸಲಾಗಿದೆ. 

READ ALSO

ಪ್ರಕರಣದಲ್ಲಿ ಎಎಸ್ಐಗಳು, ಐದು ಹೆಡ್ ಕಾನ್ಸ್ ಟೇಬಲ್ ಗಳಿದ್ದು ಅವರನ್ನು ಕೊಣಾಜೆ, ಬಜ್ಪೆ, ಕಂಕನಾಡಿ ನಗರ, ಪಾಂಡೇಶ್ವರ, ಬಂದರು, ಉರ್ವಾ ಮತ್ತು ಬರ್ಕೆ ಠಾಣೆಗಳಿಗೆ ವರ್ಗಾಯಿಸಿ ಆದೇಶ ಮಾಡಲಾಗಿದೆ. ನಾಳೆಯೇ ನಿಯೋಜಿಸಿದ ಠಾಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಿಷನರ್ ಶಶಿಕುಮಾರ್, ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ನಮ್ಮ ಪ್ರಯತ್ನದ ನಡುವೆ ಈ ರೀತಿಯ ಘಟನೆ ನಡೆದಿರುವುದು ಪೊಲೀಸರ ಘನತೆಗೆ ಕುಂದು ತಂದಿದೆ. ಕರ್ತವ್ಯದ ಸಮಯದಲ್ಲಿ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯ ಜೊತೆಗೆ ಜೊತೆಗೆ ಕುಳಿತು ಟೇಬಲ್ ಹಂಚಿಕೊಂಡಿದ್ದು ತಪ್ಪೆಂದು ಪರಿಗಣಿಸಲಾಗಿದೆ. ಹೀಗಾಗಿ ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.