ನವದೆಹಲಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಾಲಿ ರಾಜ್ಯಪಾಲರಾಗಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿಯು ತೆರೆಕಂಡಿದ್ದು, ರಾಜ್ಯ ರಾಜಭವನಕ್ಕೆ ಹೊಸ ಮುಖ್ಯಸ್ಥರ ಆಗಮನವಾಗಲಿದೆ.

ಕರ್ನಾಟಕ ಸೇರಿದಂತೆ ಒಟ್ಟು ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರ ಬದಲಾವಣೆ ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಗೆಹ್ಲೋಟ್ ಬದಲಿಗೆ ಡಾ.ಸುಧಾ ಯಾದವ್ ಸಾರಥ್ಯ ವಹಿಸಲಾಗಿದೆ. ಕೆಲ ವರ್ಷಗಳಿಂದ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಜಾಗಕ್ಕೆ ಇದೀಗ ಸುಧಾ ಯಾದವ್ ಅವರನ್ನು ನಿಯೋಜಿಸಲಾಗಿದೆ.
ಆದರೆ, ಹುದ್ದೆಯಿಂದ ನಿರ್ಗಮಿಸುತ್ತಿರುವ ಗೆಹ್ಲೋಟ್ ಅವರಿಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಷ್ಟ್ರಪತಿ ಭವನವಾಗಲಿ ಮುಂದಿನ ಯಾವುದೇ ಹೊಣೆಗಾರಿಕೆಯನ್ನು ಸದ್ಯಕ್ಕೆ ನಿಗದಿಪಡಿಸಿಲ್ಲ. ನೂತನ ರಾಜ್ಯಪಾಲರಾಗಿ ನಿಯೋಜನೆಗೊಂಡಿರುವ ಸುಧಾ ಯಾದವ್ ಅವರು ಶೀಘ್ರದಲ್ಲೇ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇತರ ರಾಜ್ಯಗಳಲ್ಲೂ ಮಹತ್ವದ ಬದಲಾವಣೆಕರ್ನಾಟಕದ ಜೊತೆಗೆ ದೇಶದ ಇತರ ಐದು ರಾಜ್ಯಗಳಿಗೂ ರಾಜ್ಯಪಾಲರ ನೇಮಕ ಹಾಗೂ ವರ್ಗಾವಣೆ ಪ್ರಕ್ರಿಯೆ ನಡೆದಿದೆ.
ಸಿಕ್ಕಿಂನಲ್ಲಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಹಿಂದೆ ಕೇರಳ ರಾಜ್ಯಪಾಲರಾಗಿದ್ದುಕೊಂಡೇ ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡಿನ ಪೂರ್ಣಾವಧಿ ಜವಾಬ್ದಾರಿ ವಹಿಸಲಾಗಿದೆ.
ಸಿಕ್ಕಿಂ: ಓಂ ಪ್ರಕಾಶ್ ಮಾಥುರ್ ಅವರ ಸ್ಥಾನಕ್ಕೆ ದುಷ್ಯಂತ್ ಗೌತಮ್ ಅವರನ್ನು ನೇಮಿಸಲಾಗಿದೆ.
ಒಡಿಶಾ & ಉತ್ತರಾಖಂಡ: ಒಡಿಶಾದಲ್ಲಿ ಹರಿ ಬಾಬು ಕಂಭಂಪಾಟಿ ಅವರ ಬದಲಿಗೆ ಬ್ರಜ್ ಮೋಹನ್ ರಾಮ್ ಹಾಗೂ ಉತ್ತರಾಖಂಡದಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರ ಸ್ಥಾನಕ್ಕೆ ಧಾಲ್ ಸಿಂಗ್ ಬಿಸೆನ್ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಒಡಿಶಾ ಹಾಗೂ ಉತ್ತರಾಖಂಡದಿಂದ ನಿರ್ಗಮಿಸಿದ ರಾಜ್ಯಪಾಲರಿಗೂ ಸದ್ಯ ಯಾವುದೇ ಹೊಸ ಜವಾಬ್ದಾರಿಯನ್ನು ಘೋಷಿಸಲಾಗಿಲ್ಲ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.





