ಬೆಳ್ತಂಗಡಿ: ಪತ್ರಿಕೋದ್ಯಮ ಕ್ಷೇತ್ರದ ಸೇವೆಗಾಗಿ 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಮನೋಹರ್ ಬಳಂಜ ಅವರನ್ನು ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಸೋಮವಾರ ಸಂಘದ ಕಚೇರಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷೆ ರಮಾದೇವಿ ಅವರು ಸನ್ಮಾನ ನೆರವೇರಿಸಿ ಮಾತನಾಡಿ, 2004ರಲ್ಲಿ ಹುಣ್ಸೆಕಟ್ಟೆ ಪರಿಸರದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪನೆಯಾಗಬೇಕೆಂಬ ಬೇಡಿಕೆ ವ್ಯಕ್ತವಾದಾಗ ಮನೋಹರ್ ಬಳಂಜ ಅವರು ಅವಿರತವಾಗಿ ಶ್ರಮಿಸಿದ್ದರು. ಕೇವಲ 20 ಲೀಟರ್ ಹಾಲಿನ ಸಂಗ್ರಹದೊಂದಿಗೆ ಆರಂಭವಾದ ಸಂಘ ಇಂದು 1,200 ಲೀಟರ್‌ಗೂ ಅಧಿಕ ಹಾಲು ಸಂಗ್ರಹಿಸುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆ ಅಂದಿನ ಅವರ ಪರಿಶ್ರಮವೂ ಪ್ರಮುಖ ಕಾರಣವಾಗಿದೆ.
ಅಂತಹ ಸಮಾಜಮುಖಿ ಸೇವೆ ಸಲ್ಲಿಸಿದ ಮನೋಹರ್ ಬಳಂಜ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮ್ಮ ಸಂಘಕ್ಕೇ ಗೌರವ ದೊರೆತಂತಾಗಿದೆ. ಬಾಲ್ಯದಿಂದಲೇ ಸಮಾಜಸೇವೆ ಹಾಗೂ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಮನೋಹರ್ ಬಳಂಜ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಸೇವೆ ಮಾಡುವ ನನಗೆ ದೇವರ ಅನುಗ್ರಹ ಹಾಗೂ ಹಿರಿಯರ ಆಶೀರ್ವಾದವೇ ಶಕ್ತಿಯಾಗಿದೆ. 22 ವರ್ಷಗಳ ಹಿಂದಿನ ನನ್ನ ಸೇವೆಯನ್ನು ನೆನಪಿನಲ್ಲಿಟ್ಟುಕೊಂಡು ಸಂಘವು ಗೌರವಿಸಿರುವುದು ತುಂಬಾ ಸಂತಸ ತಂದಿದೆ ಎಂದರು.
ಸಂಘದ ಕಾರ್ಯದರ್ಶಿ ಸುಜಾತಾ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ಶೋಭಾ ವಂದಿಸಿದರು. ಸಂಘದ ಉಪಾಧ್ಯಕ್ಷೆ ಶಿವಪ್ರಭಾ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.






