ಮಂಗಳೂರು: ಮಂಗಳೂರು ಕೇಂದ್ರಿತ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಓ) ಬ್ಯಾಂಕಿಂಗ್ ಕ್ಷೇತ್ರದ ಹಿರಿಯ ಅನುಭವಿ ಉದಯಕುಮಾರ್ ಹೆಬ್ಬಾರ್ ಅವರನ್ನು ನೇಮಕ ಮಾಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 16, 2026ರಂದು ನೀಡಿದ ಅನುಮೋದನೆಯ ಮೇರೆಗೆ, ನವೆಂಬರ್ 18ರಂದು ನಡೆದ ಕರ್ಣಾಟಕ ಬ್ಯಾಂಕ್ ಆಡಳಿತ ಮಂಡಳಿಯ ಸಭೆಯಲ್ಲಿ ಉದಯಕುಮಾರ್ ಹೆಬ್ಬಾರ್ ಅವರ ನೇಮಕಾತಿಗೆ ಅಧಿಕೃತ ಒಪ್ಪಿಗೆ ನೀಡಲಾಗಿದೆ. ಇವರು ಬ್ಯಾಂಕ್‌ನ ಹೆಚ್ಚುವರಿ ನಿರ್ದೇಶಕರು ಮತ್ತು ಪೂರ್ಣಾವಧಿ ನಿರ್ದೇಶಕರಾಗಿ (ಎಂಡಿ & ಸಿಇಓ ವಿಭಾಗದಲ್ಲಿ) ಕಾರ್ಯನಿರ್ವಹಿಸಲಿದ್ದಾರೆ. ಇವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮುಂದಿನ 3 ವರ್ಷಗಳ ಕಾಲ ಇವರ ಅಧಿಕಾರಾವಧಿ ಇರಲಿದೆ. (ಇವರು ಅಧಿಕಾರ ಸ್ವೀಕರಿಸುವ ನಿರ್ದಿಷ್ಟ ದಿನಾಂಕವನ್ನು ಬ್ಯಾಂಕ್ ಪ್ರತ್ಯೇಕವಾಗಿ ಪ್ರಕಟಿಸಲಿದೆ ಹಾಗೂ ಈ ನೇಮಕಾತಿಗೆ ಷೇರುದಾರರ ಅನುಮೋದನೆಯ ಪ್ರಕ್ರಿಯೆ ಬಾಕಿಯಿದೆ).
ಉದಯಕುಮಾರ್ ಹೆಬ್ಬಾರ್ ಅವರು ಬ್ಯಾಂಕಿಂಗ್, ಹಣಕಾಸು ಕಾರ್ಯಾಚರಣೆ, ಗ್ರಾಮೀಣ ಹಾಗೂ ಕೃಷಿ ಹಣಕಾಸು ಮತ್ತು ಮೈಕ್ರೋಫೈನಾನ್ಸ್ ಕ್ಷೇತ್ರಗಳಲ್ಲಿ 40 ವರ್ಷಗಳಿಗೂ ಹೆಚ್ಚಿನ ಸುದೀರ್ಘ ಅನುಭವ ಹೊಂದಿದ್ದಾರೆ.
ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಈ ಹಿಂದೆ ಅವರು ದೇಶದ ಪ್ರಮುಖ ಮೈಕ್ರೋಫೈನಾನ್ಸ್ ಸಂಸ್ಥೆಯಾದ ‘ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್’ನ ಮುಖ್ಯಸ್ಥರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 2010ರ ಸೆಪ್ಟೆಂಬರ್‌ನಿಂದ 2015ರ ಜೂನ್‌ವರೆಗೆ ಸಿಇಒ ಆಗಿ, ತದನಂತರ 2015ರ ಜೂನ್‌ನಿಂದ 2025ರ ಜೂನ್‌ವರೆಗೆ ಸುಮಾರು ಒಂದು ದಶಕ ಕಾಲ ಎಂಡಿ ಮತ್ತು ಸಿಇಒ ಆಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಪ್ರಸ್ತುತ ಅವರು ಅದೇ ಸಂಸ್ಥೆಯಲ್ಲಿ ನಾನ್-ಎಕ್ಸಿಕ್ಯೂಟಿವ್ (ನಾಮಿನಿ) ನಿರ್ದೇಶಕರಾಗಿದ್ದಾರೆ.
ಕ್ರೆಡಿಟ್ ಆಕ್ಸೆಸ್ ಸೇರುವ ಮುನ್ನ ಅವರು ಕಾರ್ಪೊರೇಷನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬಾರ್ಕ್ಲೇಸ್ ಬ್ಯಾಂಕ್ ನಂತಹ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಕರ್ಣಾಟಕ ಬ್ಯಾಂಕ್‌ನ ನಾಯಕತ್ವ ಬದಲಾವಣೆಯ ಈ ಸಂದರ್ಭದಲ್ಲಿ, ಆರ್‌ಬಿಐ ಅನುಮೋದನೆಯೊಂದಿಗೆ 4 ದಶಕಗಳ ಬ್ಯಾಂಕಿಂಗ್ ಮತ್ತು ಮೈಕ್ರೋ-ಬ್ಯಾಂಕಿಂಗ್ ಅನುಭವವಿರುವ ಉದಯಕುಮಾರ್ ಹೆಬ್ಬಾರ್ ಅವರ ಆಗಮನವು ಬ್ಯಾಂಕ್‌ನ ಆಡಳಿತಾತ್ಮಕ ಸ್ಥಿರತೆಗೆ ಬಲ ನೀಡಲಿದೆ. ವಿಶೇಷವಾಗಿ ಚಿಲ್ಲರೆ ಬ್ಯಾಂಕಿಂಗ್, ಗ್ರಾಮೀಣ ಸಾಲ ವಿತರಣೆ ಹಾಗೂ ಅಪಾಯ ನಿರ್ವಹಣೆ ವಿಭಾಗಗಳಲ್ಲಿ ಬ್ಯಾಂಕ್ ಮತ್ತಷ್ಟು ಬೆಳವಣಿಗೆ ಸಾಧಿಸಲು ಇವರ ಅನುಭವ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.





