ಉಳುವವನೇ ಹೊಲದೊಡೆಯ ಕಾಯ್ದೆಯನ್ನು ದುಡ್ಡಿದ್ದವನೇ ಹೊಲದೊಡೆಯ ಮಾಡಿದ ಸರಕಾರ: ಶಿವಕುಮಾರ್ ಎಸ್. ಎಂ ಆಕ್ರೋಶ

ಬೆಳ್ತಂಗಡಿ: ರೈತ ವಿರೋಧಿ ನೀತಿಗಳನ್ನು ಜಾರಿ ಮಾಡುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಿದೆ. ಉಳುವವನೇ ಹೊಲದೊಡೆಯ ಎಂಬ ಕಾಯ್ದೆಯನ್ನು ದುಡ್ಡಿದ್ದವನೇ ಹೊಲದೊಡೆಯ ಎಂಬಂತೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.

ಅವರು ಕರ್ನಾಟಕ ಪ್ರಾಂತ ರೈತ ಸಂಘ , ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆ , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ , ಸುಲ್ಕೇರಿ ನಾಯ್ದಗುರಿ, ನೆಕ್ಕರೆಪಲ್ಕೆ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರೋಧಿಸಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

READ ALSO

ಕೊರೋನಾ ವೈರಸ್ ವ್ಯಾಪಕವಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕು ತಡೆಗಟ್ಟುವ ಬದಲಾಗಿ ಕೇಂದ್ರ, ರಾಜ್ಯ ಸರ್ಕಾರಗಳು ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತರ ಬೆನ್ನೆಲುಬು ಮುರಿಯುವ ಕರಾಳ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಮರಣಶಾಸನ ಬರೆಯಲಾಗಿದೆ ಎಂದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ ಈ ಮಣ್ಣಿನ ಮೂಲನಿವಾಸಿ ಆದಿವಾಸಿ ಮಲೆಕುಡಿಯ ಸಮುದಾಯದ ಮೇಲೆ ಸರ್ಕಾರಿ ಪ್ರಾಯೋಜಿತ ದೌರ್ಜನ್ಯ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 73 ವರ್ಷ ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದರು.

ವಿವಿಧ ಕಾನೂನು, ಕಾಯ್ದೆ ಅಡಿಯಲ್ಲಿ ಮಲೆಕುಡಿಯ ಸಮುದಾಯದ ಮೇಲೆ ದೌರ್ಜನ್ಯ ನಡೆಸಿದ ಸರ್ಕಾರ ಇದೀಗ ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡಿರುವ ಜಮೀನಿಗೆ ಬೇಲಿ ಹಾಕಿ ದೌರ್ಜನ್ಯ ನಡೆಸುತ್ತಿದೆ. ಇಂತಹ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು ಸುಲ್ಕೇರಿ ಗ್ರಾಮದ ಪ್ರತಿ ಆದಿವಾಸಿಗಳಿಗೆ ತಲಾ ಒಂದು ಎಕರೆ ಜಮೀನನ್ನು ಪ್ರಥಮ ಅಕ್ರಮ ಸಕ್ರಮ ಬೈಠಕ್ ನಲ್ಲಿ ಮಂಜೂರು ಮಾಡುವ ಮೂಲಕ ಕೊಟ್ಟ ಮಾತನ್ನು ಶಾಸಕರು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಆದಿವಾಸಿಗಳ ಕೃಷಿ ಜಮೀನಿಗೆ ಬೇಲಿ ಹಾಕುವ ಬೆಳ್ತಂಗಡಿ ತಹಶಿಲ್ದಾರರು ಶ್ರೀಮಂತರು, ಭೂಮಾಲೀಕರು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಜಮೀನನ್ನು ತೆರವು ಮಾಡಲಿ ಅದು ಬಿಟ್ಟು ಆದಿವಾಸಿಗಳ ಮೇಲೆ ದೌರ್ಜನ್ಯ ಮತ್ತೆ ನಡೆಸಿದರೆ ಸಂಘರ್ಷಮಯ ಹೋರಾಟ ನಡೆಸಬೇಕಾಗುತ್ತದೆ , ಮುಂದಾಗುವ ಘಟನೆಗಳಿಗೆ ಸರ್ಕಾರ ನೇರವಾಗಿ ಹೊಣೆಯಾಗಬೇಕಾದೀತು ಎಂದು ಎಚ್ಚರಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ , ತಾಲೂಕು ಅಧ್ಯಕ್ಷ ವಸಂತ ನಡ , ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆಯ ಜಿಲ್ಲಾ ಸಮಿತಿ ಸದಸ್ಯ ಜಯಾನಂದ ಪಿತ್ತಿಲು ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಸೆಲಿಮೊನು ಪುದುವೆಟ್ಟು , ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಪಾಧ್ಯಕ್ಷ ನಾರಾಯಣ ಆಲಂಗಾಯಿ , ಸದಸ್ಯರಾದ ಶ್ವೇತ ಬೆಳ್ತಂಗಡಿ, ಪದ್ಮಾವತಿ ಬೆಳ್ತಂಗಡಿ , ರವಿ ಮಲೆಕುಡಿಯ ನೆಕ್ಕರೆಪಲ್ಕೆ, ಆನಂದ ಮಲೆಕುಡಿಯ ನೆಕ್ಕರೆಪಲ್ಕೆ, ಆನಂದ ಮಲೆಕುಡಿಯ ನೆಕ್ಕರೆಪಲ್ಕೆ, ಕರ್ನಾಟಕ ಪ್ರಾಂತ ರೈತ ಸಂಘದ ಮಹಿಳಾ ಘಟಕದ ಸುಕನ್ಯಾ ಹೆಚ್ , ಸಿಐಟಿಯು ಮುಖಂಡರಾದ ಕುಸುಮ ಮಾಚಾರು, ಕೃಷ್ಣ ನೆರಿಯ ವಹಿಸಿದ್ದರು.