ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ ಕ್ಷೇತ್ರವಾಗಿ ಮಾತ್ರವಲ್ಲದೆ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕವೂ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸಕಲೇಶಪುರದ ರೈತಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳು ಅನೇಕ ಕುಟುಂಬಗಳ ಸಂಸಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬನೆ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಸೇವಾ ಕಾರ್ಯಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರನ್ನು ಸಂಘಟಿಸಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲಗೊಳಿಸುವ ಕಾರ್ಯ ಶ್ಲಾಘನೀಯವಾಗಿದೆ. ನಿರ್ಗತಿಕರಿಗೆ ಮಾಸಾಶನ ನೀಡುವುದು, ವಾತ್ಸಲ್ಯ ಸೂರು ನಿರ್ಮಾಣ, ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯದಿಂದ ಹಿಡಿದು ಅಶಕ್ತರ ಕಣ್ಣೀರೊರೆಸುವವರೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ, ಚಿಂತನೆ ಹಾಗೂ ಕಾರ್ಯಕ್ಷಮತೆ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ನಾಡಿನ ವಿವಿಧ ದೇವಸ್ಥಾನಗಳು, ಮಠ-ಮಂದಿರಗಳ ಅಭಿವೃದ್ಧಿಯ ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕ್ ಪ್ರತಿನಿಧಿಯಾಗಿ ಆರ್ಥಿಕ ಸೇವೆ ಹಾಗೂ ಸಹಕಾರ ಒದಗಿಸಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳಿಗೆ ಭರವಸೆಯ ಬೆಳಕು ದೊರೆತಿದೆ ಎಂದು ತಿಳಿಸಿದರು. ಮಹಿಳೆಯರಲ್ಲಿ ಜ್ಞಾನ, ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ಸಾಮಾಜಿಕ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಜ್ಞಾನ ವಿಕಾಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಕಾನೂನು ಅರಿವು, ಸೈಬರ್ ಅಪರಾಧಗಳ ಕುರಿತು ಜಾಗೃತಿ, ಆರ್ಥಿಕ ಸಾಕ್ಷರತೆ, ಮಹಿಳಾ ಸಬಲೀಕರಣ, ಸ್ವಚ್ಛತೆ ಹಾಗೂ ಕುಟುಂಬ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಹಿಳೆಯರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. “ಜ್ಞಾನದಿಂದ ಆತ್ಮವಿಶ್ವಾಸ, ಆತ್ಮವಿಶ್ವಾಸದಿಂದ ಸ್ವಾವಲಂಬನೆ” ಎಂಬ ಆಶಯದೊಂದಿಗೆ ನಡೆಯುತ್ತಿರುವ ಜ್ಞಾನ ವಿಕಾಸ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ತಮ್ಮ ಹಕ್ಕುಗಳು, ಜವಾಬ್ದಾರಿಗಳು ಮತ್ತು ಸುರಕ್ಷತೆಯ ಕುರಿತು ಅರಿವು ಮೂಡಿಸಲು ಸಹಕಾರಿಯಾಗುತ್ತಿವೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಸೈಬರ್ ಅಪರಾಧಗಳ ಬಗ್ಗೆ ಅರಿವು ಹಾಗೂ ಜಾಗೃತಿ: ಮಹಿಳಾ ಸಬಲೀಕರಣಕ್ಕೆ ಆದ್ಯತೆ: ಮಾಲತೀಶ್ SK
ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸೈಬರ್ ವಂಚನೆ ಹಾಗೂ ಆನ್‌ಲೈನ್ ಅಪರಾಧಗಳ ಕುರಿತು ಹೆಚ್ಚಿನ ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಪೋಲೀಸ್ ಉಪ ಅಧೀಕ್ಷಕ ಮಾಲತೀಶ್ SK ತಿಳಿಸಿದರು.ಮೊಬೈಲ್‌ಗೆ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು, OTP, PIN, ಪಾಸ್‌ವರ್ಡ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಅತಿಯಾಗಿ ಹಂಚಿಕೊಳ್ಳದಿರುವುದು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ತಾಂತ್ರಿಕವಾಗಿ ಸ್ವಾವಲಂಬಿಗಳಾಗಬೇಕು. ಯಾವುದೇ ರೀತಿಯ ಸೈಬರ್ ವಂಚನೆ ಅಥವಾ ಕಿರುಕುಳಕ್ಕೆ ಒಳಗಾದಲ್ಲಿ ಭಯಪಡದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪೋಲೀಸ್ ನಿರೀಕ್ಷಕರಾದ ಬಸವನಗೌಡ.ಕೆ ಪಾಟೀಲ್ ಮಾತನಾಡಿ ಮಹಿಳೆಯರ ಹಕ್ಕುಗಳು, ಸ್ವಾವಲಂಬನೆ, ಸುರಕ್ಷತೆ, ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿಚಾರ ಮಂಡಿಸಿದರು. ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಡಿಜಿಟಲ್ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಬಳಸುವ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆ ಸದಸ್ಯರಾದ ಗಿರೀಶ್ ಮಂಜುನಾಥ್, ರಾಜ್ ಕುಮಾರ್ ಕ್ಯಾಮನಹಳ್ಳಿ , ರೆಡ್ ಕ್ರಾಸ್ ಸಕಲೇಶಪುರ ತಾಲೂಕು ಘಟಕದ ಕಾರ್ಯದರ್ಶಿ ರೇಖಾ ಸುರೇಶ್, ಯೋಜನಾಧಿಕಾರಿ ರಾಜೇಶ್ ಎಂ, ಹಾಗೂ ಸಭೆಯ ಅಧ್ಯಕ್ಷತೆಯನ್ನು ಸರೋಜ ನಾಗೇಶ್ ವಹಿಸಿದ್ದರು.
ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ಯೋಜನೆಯ ಕಾರ್ಯಕರ್ತರು ಭಾಗವಹಿಸಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.





