ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ್ದು, ಸಾಹುಕಾರ್ ವಿರುದ್ದ ಯುವತಿ ಸಿಡಿದೆದ್ದಿದ್ದಾಳೆ.
ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿರುವ ಯುವತಿ, ಜಾರಕಿಹೊಳಿ ವಿರುದ್ದ ಗಂಭೀರವಾಗಿರುವ ಆರೋಪವನ್ನು ಮಾಡಿದ್ದಾಳೆ. ವಿಡಿಯೋ ಹೇಗೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಕೆಲಸ ಕೊಡಿಸುವುದಾಗಿ ನನಗೆ ರಮೇಶ್ ಜಾರಕಿಹೊಳಿ ವಂಚಿಸಿದ್ದಾರೆ. ನಂತರದಲ್ಲಿ ವಿಡಿಯೋವನ್ನು ಅವರೇ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.
ನನಗೆ ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ. ಇದೀಗ ಮನೆಯ ಬಳಿಗೆ ತುಂಬಾ ಜನರು ಬಂದು ಹೋಗುತ್ತಿದ್ದಾರೆ. ನನ್ನ ಮಾನ, ಮರ್ಯಾದೆ ಎಲ್ಲಾ ಹೋಗಿದೆ. ನನ್ನ ತಂದೆ, ತಾಯಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ ಯಾವುದೇ ರಾಜಕಾರಣಿಗಳ ಬೆಂಬಲವೂ ಇಲ್ಲ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದಿದ್ದಾರೆ.
ವಿಡಿಯೋದಲ್ಲಿ ಪ್ರಮುಖವಾಗಿ ರಮೇಶ್ ಜಾರಕಿಹೊಳಿ ವಿರುದ್ದ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾಳೆ. ಅಲ್ಲದೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ರಕ್ಷಣೆ ಕೋರಿ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನ ಬೆನ್ನಲ್ಲೇ ಎಫ್ ಐಆರ್ ದಾಖಲಾಗಿದೆ. ಇದೀಗ ಯುವತಿಯ ಸ್ಪೋಟಕ ಹೇಳಿಕೆಯಿಂದಾಗಿ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.