ಕೊಟ್ಟಾಯಂ (ಕೇರಳ): ಕೇರಳದಾದ್ಯಂತ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಕೋಟ್ಯಂತರ ಆನೆ ಪ್ರಿಯರ ಹೃದಯ ಗೆದ್ದಿದ್ದ ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಭಾನುವಾರ ಸಿಡಿಲು ಬಡಿದು ದುರಂತವಾಗಿ ಸಾವನ್ನಪ್ಪಿದೆ.
ಎರಟ್ಟುಪೆಟ್ಟಾ ಬಳಿಯ ಮೇಲಂಪಾರದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಬ್ರಹ್ಮದತ್ತನ್, ಕಳೆದ ಒಂದು ತಿಂಗಳಿನಿಂದ ಮಾಲೀಕ ರಾಜೇಶ್ ಪಲ್ಲಟ್ ಅವರ ನಿವಾಸದ ಬಳಿಯ ತಾತ್ಕಾಲಿಕ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. 28 ವರ್ಷಗಳ ಹಿಂದೆ ಅರುಣಾಚಲ ಪ್ರದೇಶದ ದಟ್ಟ ಕಾಡುಗಳಲ್ಲಿ ಮರದ ಆನೆಯಾಗಿ ಕೆಲಸ ಮಾಡುತ್ತಿದ್ದ ಇದನ್ನು ಕೊಟ್ಟಾಯಂನ ಪುತುಪ್ಪಳ್ಳಿಯ ಪೋಥನ್ ವರ್ಗೀಸ್ ಹಾಗೂ ಚಾಕೊ ಸಹೋದರರು ಕೇರಳಕ್ಕೆ ಕರೆತಂದಿದ್ದರು.
ಆರಂಭದಲ್ಲಿ ‘ಪುತುಪ್ಪಳ್ಳಿ ಬ್ರಹ್ಮದತ್ತನ್’ ಎಂದು ಕರೆಯಲ್ಪಡುತ್ತಿದ್ದ ಈ ಆನೆಯನ್ನು 16 ವರ್ಷಗಳ ಹಿಂದೆ ಪಲ್ಲತ್ತ್ ಕುಟುಂಬ ಖರೀದಿಸಿದ ಬಳಿಕ ‘ಪಲ್ಲಟ್ಟು ಬ್ರಹ್ಮದತ್ತನ್’ ಎಂದು ಮರುನಾಮಕರಣ ಮಾಡಲಾಯಿತು.
10 ಅಡಿ 2 ಇಂಚುಗಳ ಬೃಹತ್ ಎತ್ತರ, ಅಗಲವಾದ ಹಣೆ ಹಾಗೂ ಉದ್ದನೆಯ ದಂತಗಳನ್ನು ಹೊಂದಿದ್ದ ಈ ಗಜರಾಜ, ಮಧ್ಯ ಕೇರಳದ ಪ್ರಮುಖ ದೇವಾಲಯ ಉತ್ಸವಗಳಲ್ಲಿ ಅತ್ಯಂತ ಪ್ರಸಿದ್ಧ ಆನೆಯಾಗಿ ಹೊರಹೊಮ್ಮಿತ್ತು. ತ್ರಿಶೂರ್ ಪೂರಂನ ಪರಮೆಕ್ಕಾವು ದೇವಸ್ಥಾನದ ಪ್ರಸಿದ್ಧ ‘ರಾತ್ರಿ ಪೂರಂ’ನಲ್ಲಿ ದೇವರ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಬ್ರಹ್ಮದತ್ತನ್, ಎಟ್ಟುಮನೂರ್ ಎಝರಪೊನ್ನನ ಮತ್ತು ವೈಕಥಷ್ಟಮಿ ಉತ್ಸವಗಳ ನಿಯಮಿತ ಆಕರ್ಷಣೆಯಾಗಿತ್ತು. ತ್ರಿಶೂರ್ ಪೂರಂ ಮುಗಿದ ಬಳಿಕ ಗುರುವಾಯೂರ್ ದೇವಸ್ಥಾನಕ್ಕೆ ತೆರಳಿ ದೇವರಿಗೆ ಸೊಂಡಿಲೆತ್ತಿ ನಮಸ್ಕರಿಸುವ ಮೂಲಕ ಇದು ಪ್ರಸಿದ್ದಿ ಪಡೆದಿತ್ತು.
‘ಗಜಕೌಸ್ತುಭಂ ಪಲ್ಲಟ್ಟು ಬ್ರಹ್ಮದತ್ತನ್’ ಎಂಬ ಇನ್‌ಸ್ಟಾಗ್ರಾಮ್ ಪುಟದ ಮೂಲಕ ಈ ಆನೆ ಆನ್‌ಲೈನ್‌ನಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿತ್ತು.ತನ್ನ ದೀರ್ಘಕಾಲದ ಮಾವುತ ದಾಮೋದರನ್ ನಾಯರ್ ಅವರೊಂದಿಗೆ ಬ್ರಹ್ಮದತ್ತನ್ ಅಪರೂಪದ ಭಾವನಾತ್ಮಕ ಬಾಂಧವ್ಯ ಹೊಂದಿತ್ತು. ಆರಂಭದಲ್ಲಿ ಮಲಯಾಳಂ ಅರ್ಥವಾಗದಿದ್ದಾಗ ದಾಮೋದರನ್ ಅವರು ಪ್ರೀತಿಯಿಂದ ಹಿಂದಿ ಕಲಿಸಿ ಆನೆಯನ್ನು ಪಳಗಿಸಿದ್ದರು.
ವಡನಪ್ಪಲ್ಲಿ ಗಣೇಶಮಂಗಲಂ ಉತ್ಸವದ ವೇಳೆ ಮತ್ತೊಂದು ಆನೆ ಕೋಪಗೊಂಡು ದಾಮೋದರನ್ ನಾಯರ್ ಅವರ ಮೇಲೆ ದಾಳಿ ಮಾಡಲು ಬಂದಾಗ, ಬ್ರಹ್ಮದತ್ತನ್ ಮಧ್ಯಪ್ರವೇಶಿಸಿ ಆ ಆನೆಯನ್ನು ಓಡಿಸಿ ತನ್ನ ಮಾವುತನನ್ನು ಸಾವಿನಿಂದ ರಕ್ಷಿಸಿತ್ತು.
ಜೂನ್ 2021 ರಲ್ಲಿ ದಾಮೋದರನ್ ನಾಯರ್ (74) ನಿಧನರಾದಾಗ, ಬ್ರಹ್ಮದತ್ತನ್ ಅವರ ಪಾರ್ಥಿವ ಶರೀರಕ್ಕೆ ಸೊಂಡಿಲೆತ್ತಿ ಅಂತಿಮ ಪ್ರಣಾಮ ಸಲ್ಲಿಸಿದ ದೃಶ್ಯ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸಿತ್ತು. ಇದೀಗ ಗಜರಾಜನ ದುರಂತ ನಿಧನದ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ಹಾಗೂ ಸ್ಥಳೀಯರು ಮೇಲಂಪಾರಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಬ್ರಹ್ಮದತ್ತನ್ ನಿಧನಕ್ಕೆ ಕೇರಳದ ದೇವಸ್ವಂ ಮಂಡಳಿ ಹಾಗೂ ಉತ್ಸವ ಪ್ರಿಯರು ತೀವ್ರ ಕಂಬನಿ ಮಿಡಿದಿದ್ದಾರೆ.ಪಲ್ಲಟ್ಟು ಬ್ರಹ್ಮದತ್ತನ್ ಆನೆಯ ಆ ಗಾಂಭಿರ್ಯ ನಡೆ, ಗಜರಾಜ ಎಂಬ ಹೆಸರಿಗೆ ಅನ್ವರ್ಥವಾಗಿತ್ತು, ಅತ್ಯಂತ ಶಾಂತ ಚಿತ್ತನಾಗಿದ್ದ ಪಲ್ಲಟ್ಟು ಬ್ರಹ್ಮದತ್ತನ್ ಜೊತೆಗೆ ಮಾವುತರು ಅಂಕುಶವನ್ನ ಬಳಸುತ್ತಲೇ ಇರಲಿಲ್ಲ. ಜಾತ್ರೆ ಸಂದರ್ಭಗಳಲ್ಲಿ ಮಾತ್ರ ಅಂಕುಶಗಳನ್ನು ಮಾವುತ ನೆಪ ಮಾತ್ರಕ್ಕೆ ಹಿಡಿದುಕೊಂಡಿರುತ್ತಿದ್ದ, ಧಾರ್ಮಿಕ ಗ್ರಂಥಗಳಲ್ಲಿ ಆನೆಯ ವರ್ಣನೆಯಂತೆ ಇರುವ ಪಲ್ಲಟ್ಟು ಬ್ರಹ್ಮದತ್ತನ್ ಅಕಾಲಿಕ ನಿಧನ, ಎಲ್ಲರ ಕಣ್ಣಲ್ಲೂ ಕಣ್ಣೀರು ತರಿಸಿದೆ.





