
ಚಿತ್ರದುರ್ಗ: ಜೀವಂತ ಮೊಲ ಸಿಗದ ಹಿನ್ನೆಲೆಯಲ್ಲಿ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದ ಜನ ಸಂಕ್ರಾಂತಿ ಹಬ್ಬವನ್ನೇ ಮುಂದೂಡಿದ ಘಟನೆ ವರದಿಯಾಗಿದೆ.
ಕಂಚೀವರದರಾಜಸ್ವಾಮಿ ಭಕ್ತರು ಮಕರ ಸಂಕ್ರಾಂತಿ ದಿನ ಕಾಡಿನಲ್ಲಿ ಬೇಟೆಯಾಡಿ ಮೊಲವೊಂದನ್ನು ಜೀವಂತವಾಗಿ ಹಿಡಿದು ದೇಗುಲಕ್ಕೆ ತರುತ್ತಾರೆ. ನಂತರ ಅದರ ಕಿವಿಚುಚ್ಚಿ ಓಲೆ ಹಾಕಿ, ವಿಶೇಷ ಅಲಂಕಾರ ಮಾಡಿ, ನಾಮಧಾರಣೆ ಮಾಡುವ ಮೂಲಕ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುತ್ತಾರೆ. ನಂತರ ಆ ಮೊಲಕ್ಕೆ ಸ್ವಲ್ಪವೂ ಪೆಟ್ಟು ಮಾಡದಂತೆ ಪುನಃ ಕಾಡಿಗೆ ಬಿಡುವ ಮೂಲಕ ಇಲ್ಲಿನ ಜನರು ಸಂಕ್ರಾಂತಿ ಆಚರಿಸುವುದು ವಿಶೇಷ.
ಪ್ರತಿವರ್ಷದಂತೆ ಈ ವರ್ಷವು ಸಂಕ್ರಾಂತಿ ದಿನ (ಗುರುವಾರ) ಬೆಳಗ್ಗೆ 10 ಗಂಟೆಗೆ ಬೇಟೆಗಾರಿಕೆಯಲ್ಲಿ ನೈಪುಣ್ಯ ಹೊಂದಿರುವ ಸುಮಾರು 35 ಜನರ ತಂಡ ದೇಗುಲದಲ್ಲಿ ನಾಮಧಾರಣೆ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಹೆಗಲ ಮೇಲೆ ಮೊಲ ಹಿಡಿಯುವ ಐದಾರು ಬಲೆ ಹಾಕಿಕೊಂಡು, ಕಂಚೀವರದರಾಜಸ್ವಾಮಿ ಗೋವಿಂದಾ.. ಗೋವಿಂದಾ… ಎಂಬ ಘೋಷಣೆ ಕೂಗುತ್ತ ಸಮೀಪದ ಕಾಡಿಗೆ ಹೋಗಿದ್ದರು.
ಆದರೆ, ಈ ಬಾರಿ ಕಾಡಿಗೆ ಹೋದ ಬೇಟೆಗಾರರಿಗೆ ಸಂಜೆ 6.30 ಆದರೂ ಮೊಲ ಸಿಗಲಿಲ್ಲ. ಸಂಕ್ರಾಂತಿ ಆಚರಿಸಬೇಕು ಎಂಬ ನಿರೀಕ್ಷೆಯಿಂದ ಕಾಡಿನಲ್ಲಿ ಮೊಲ ಸುತ್ತಾಡಿರುವ ಜಾಗ ನೋಡಿ ಐದಾರು ಬಲೆಯನ್ನು ಹೂಡಿದ್ದರು. ಆದರೂ ಮೊಲ ಸಿಗಲಿಲ್ಲ. ಮೊಲ ಸಿಗುವವರೆಗೂ ಗ್ರಾಮಸ್ಥರು ಸಂಕ್ರಾಂತಿ ಆಚರಿಸುವುದಿಲ್ಲ. ಹೀಗಾಗಿ ಶುಕ್ರವಾರ(ಜ.15) ಬೆಳಗ್ಗೆಯಿಂದ ಮೊಲ ಬೇಟೆಗಾರಿಕೆ ಮುಂದುವರೆಸಿದ್ದಾರೆ.