COVID 19ನಲ್ಲಿ ವಿಶ್ವದ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನಕ್ಕೆ!

ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಪಟ್ಟಿಯಲ್ಲಿ ರಷ್ಯಾವನ್ನು ಮೀರಿಸಿರುವ ಭಾರತ ಈಗ ಮೂರನೇ ಸ್ಥಾನಕ್ಕೇರಿದೆ.

ಭಾನುವಾರ ರಾತ್ರಿ 9ರ ವೇಳೆಗೆ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 6,94,053ಕ್ಕೆ ತಲುಪಿದೆ. ರಷ್ಯಾದಲ್ಲಿ ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 6,80,283. ಜಾಗತಿಕವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 28.39 ಲಕ್ಷ ಹಾಗೂ ಬ್ರೆಜಿಲ್‌ನಲ್ಲಿ ಒಟ್ಟು 15.77 ಲಕ್ಷ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ.

READ ALSO

ಭಾನುವಾರ ಬೆಳಗ್ಗೆ 8.30ರ ವರೆಗಿನ 24 ತಾಸುಗಳಲ್ಲಿ ದೇಶದಲ್ಲಿ 24,850 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದವು. ಇದೇ ಅವಧಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 613. ಈ ಪಿಡುಗಿಗೆ ಈವರೆಗೆ ತುತ್ತಾದವರ ಸಂಖ್ಯೆ 19,268ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸತತ ಮೂರನೇ ದಿನವೂ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಹೊಸದಾಗಿ 6,555 ಪ್ರಕರಣಗಳು ದೃಢಪಟ್ಟಿವೆ.